ಜಂಬುಕೇಶ್ವರ
ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ತಿರುಚಿರಾಪಳ್ಳ ನಗರದಿಂದ 5 ಕಿ.ಮೀ. ಉತ್ತರಕ್ಕೆ, ಹೆಸರಾಂತ ವೈಷ್ಣವ ಕ್ಷೇತ್ರವಾದ ಶ್ರೀರಂಗದಿಂದ 2 ಕಿ.ಮೀ. ಪೂರ್ವಕ್ಕೆ ಇರುವ ಪ್ರಸಿದ್ಧ ಶೈವಕ್ಷೇತ್ರ. ಇಲ್ಲಿರುವ ಜಂಬುಕೇಶ್ವರ ಎಂಬ ಶಿವಾಲಯದಲ್ಲಿ ಅಪ್‍ಲಿಂಗ ಪ್ರತಿಷ್ಠಿತವಾಗಿದೆ. ಈ ದೇಗುಲದ ಗರ್ಭಗೃಹ ಕಾವೇರಿ ಹಾಗೂ ಕೊಳ್ಳಿಡಂ ನದಿಗಳ ನಡುವೆ, ತಗ್ಗುಭೂಮಿಯ ಮೇಲೆ, ನಿರ್ಮಿತವಾಗಿರುವುದರಿಂದ ಅದರ ಮೂಲಸ್ಥಾನದ ಶಿವಲಿಂಗ ಯಾವಾಗಲೂ ನೀರಿನಿಂದ ಸುತ್ತುವರಿಯಲ್ಪಟ್ಟಿರುತ್ತದೆ.

	ಜಂಬುಕೇಶ್ವರವನ್ನು ತಿರುವಾನೈಕ್ಕಾ, ತಿರುವಾನೈಕ್ಕಾವಲ್, ತಿರುವೆಣ್ಣಾಯಿಲ್, ತಿರುವೆಣ್ಣಾವಲ್ ಎಂದೂ ಕರೆಯುವುದಂಟು. ಇಲ್ಲಿಯ ದೇವರನ್ನು ತಿರುವೆಣ್ಣಾಯಿ, ಉಡೈಯಾರ್, ಜಂಬುನಾಥರ್, ಜಂಬುಲಿಂಗಂ ಎಂದೂ ಹೆಸರಿಸುತ್ತಾರೆ.

	ಒಂದಾನೊಂದು ಕಾಲದಲ್ಲಿ ಈ ಪುಣ್ಯಕ್ಷೇತ್ರದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಯೊಬ್ಬ ತನ್ನ ಬಳಿ ಇದ್ದ ನಾವಲ್ (ಜಂಬೂ) ಹಣ್ಣೊಂದನ್ನು ಶಿವನಿಗೆ ಅರ್ಪಿಸಿ, ಅದನ್ನು ಬೀಜಸಹಿತ ತಿಂದನೆಂದೂ ಆ ಬೀಜ ಅವನೊಳಗೇ ಬೆಳೆದು ಮರವಾಯಿತೆಂದೂ ಅದರಡಿಯಲ್ಲಿ ಲಿಂಗರೂಪದಲ್ಲಿ ನೆಲೆಸಿದ ಶಿವನಲ್ಲಿ ಆ ಋಷಿ ಐಕ್ಯಹೊಂದಿದನೆಂದೂ ಅಲ್ಲಿಯ ಸ್ಥಳಪುರಾಣ ಹೇಳುತ್ತದೆ. ಪುಷ್ಪದಂತ, ಮಾಲ್ಕವಾನ್ ಎಂಬ ಶಿವನ ಗಣನಾಥರಿಬ್ಬರು ಶಾಪವಶಾತ್ ಅನುಕ್ರಮವಾಗಿ ಆನೆಯಾಗಿಯೂ ಜೇಡವಾಗಿಯೂ ಹುಟ್ಟಿ ಆ ಸ್ಥಳದಲ್ಲಿ ಜಂಬುಲಿಂಗವನ್ನು ಆರಾಧಿಸುತ್ತಿದ್ದರೆಂದೂ ಮರದಿಂದ ಎಲೆಗಳು ಉದುರಿ ಲಿಂಗದ ಮೇಲೆ ಬೀಳದಂತೆ ಜೇಡ ಭಕ್ತಿಪೂರ್ವಕವಾಗಿ ನೇದಿದ್ದ ಬಲೆಯನ್ನು ಆಶುದ್ಧವೆಂದು ಬಗೆದು ಆನೆ ಅಳಿಸಿದಾಗ ಕೋಪಗೊಂಡ ಜೇಡ ಆನೆಯ ನಾಶಿ ದ್ವಾರವನ್ನು ಹೊಕ್ಕಿತೆಂದೂ ಅದರ ಪರಿಣಾಮವಾಗಿ ಆನೆ ಮತ್ತು ಜೇಡ ಎರಡೂ ಜೀವ ತೊರೆದು ತಮ್ಮ ಪೂರ್ವಸ್ವರೂಪ ಪಡೆದುವೆಂದೂ ಅದೇ ಸ್ಥಳಪುರಾಣದಲ್ಲಿ ಹೇಳಲಾಗಿದೆ. ಜೇಡರ ಹುಳುವಾಗಿದ್ದ ಮಾಲ್ಕವಾನ್ ಅನಂತರ ಕೋಚ್ಚೆಂಗಣಾನ್ ಎಂಬ ಚೋಳರಾಜನಾಗಿ ಜನ್ಮವೆತ್ತಿ, ಜಂಬುಕೇಶ್ವರವೂ ಸೇರಿದಂತೆ ಎಪ್ಪತ್ತು ಶಿವಾಲಯಗಳನ್ನು ನಿರ್ಮಿಸಿದನೆಂದು ತಮಿಳು ಸಾಹಿತ್ಯದಿಂದ ತಿಳಿದುಬರುತ್ತದೆ. ಈ ಪೌರಾಣಿಕ ಪ್ರಸಂಗವನ್ನು 7ನೆಯ ಶತಮಾನದ ಶಿವಭಕ್ತರುಗಳಾದ ಅಪ್ಪರ್ ಮತ್ತು ಜ್ಞಾನಸಂಬಂಧರ್ ಪ್ರಸ್ತಾಪಿಸುತ್ತಾರೆ. ತಾಮ್ರಶಾಸನದಲ್ಲೂ ಕಲಿಂಗತ್ತುಪ್ಪರಣಿ, ಪೆರಿಯಪುರಾಣಂ, ಕುಲೋತ್ತುಂಗ ಚೋಳನ್ ಉಲಾ ಎಂಬ ತಮಿಳು ಕೃತಿಗಳಲ್ಲೂ ಜಂಬುಕೇಶ್ವರ ದೇವಾಲಯದಲ್ಲಿ ಕೊರೆಯಲಾಗಿರುವ ಅನಂತರ ಕಾಲದ ಎರಡು ಶಾಸನಗಳಲ್ಲೂ ಈ ಕತೆಯ ಪ್ರಸ್ತಾಪವುಂಟು.	
ಈ ದೇವಾಲಯವನ್ನು ಮೊದಲು ನಿರ್ಮಿಸಿದವನು ಕೋಚ್ಚೆಂಗಣಾನ್. ಬಹುಶಃ ತಂಜಾವೂರಿನ ಚೋಳರು ಕಲ್ಲಿನಿಂದ ಇದನ್ನು ಪುನರ್ನಿಮಿಸಿದರು. ಐದು ಪ್ರಕಾರಗಳಿಂದ ಕೂಡಿದ ಈ ದೇಗುಲದ ಚಿಕ್ಕ ಗರ್ಭಗೃಹದ ವಿಮಾನ ಹಾಗೂ ಪರಾಂತಕ ಚೋಳನ (907-955) ಶಾಸನಗಳು ಇದರ ಪ್ರಾಚೀನತೆಗೆ ಸಾಕ್ಷಿಗಳಾಗಿವೆ. ಪರಾಂತಕನ ಅನಂತರದ ಚೋಳ ಅರಸರೂ, ಅವರ ಅನಂತರ ರಾಜ್ಯವಾಳಿದ ಪಾಂಡ್ಯ, ಹೊಯ್ಸಳ, ವಿಜಯನಗರ, ನಾಯಕ ಅರಸರು ಈ ದೇವಸ್ಥಾನದ ಆಕೃತಿ ಮತ್ತು ಆಸ್ತಿಪಾಸ್ತಿಗಳು ಬೆಳೆಯಲು ಮುಖ್ಯವಾಗಿ ಕಾರಣರಾದರು. ಈಚೆಗೆ ಸುಮಾರು 50 ವರ್ಷಗಳ ಹಿಂದೆ ನಡೆಸಲಾದ ಜೀರ್ಣೋದ್ಧಾರ ಕಾರ್ಯದ ಪರಿಣಾಮವಾಗಿ ಈ ದೇವಾಲಯ ತನ್ನ ಪ್ರಾಚೀನ ಸ್ವರೂಪವನ್ನು ಪೂರ್ಣವಾಗಿ ಕಳೆದುಕೊಂಡಿದೆ.

	13ನೆಯ ಶತಮಾನದಲ್ಲಿ ತಮಿಳುನಾಡಿನ ಈ ಪ್ರಾಂತ್ಯವನ್ನು ಕರ್ನಾಟಕದ ಹೊಯ್ಸಳರು ಸ್ವಾಧಿನಪಡಿಸಿಕೊಂಡರು. ಆ ಮನೆತನದ ವೀರಸೋಮೇಶ್ವರ 1335ರಲ್ಲಿ ತನ್ನ ಅಜ್ಜ, ಅಜ್ಜಿ, ತಂದೆ ಹಾಗೂ ಅತ್ತೆಯ ಸ್ಮರಣಾರ್ಥವಾಗಿ ಜಂಬುಕೇಶ್ವರ ದೇವಾಲಯದೊಳಗೆ ಬಲ್ಲಾಳೇಶ್ವರ, ಪದ್ಮಾಲೀಶ್ವರ, ನರಸಿಂಹೇಶ್ವರ ಮತ್ತು ಸೋಮಳೀಶ್ವರವೆಂಬ ನಾಲ್ಕು ಸಣ್ಣ ಗುಡಿಗಳನ್ನು ಕಟ್ಟಿಸಿದ. ಹೊಯ್ಸಳರ ಪ್ರಧಾನಿಗಳು ಅಂದಿನ ಕೆಲವು ವ್ಯಾಪಾರಿಗಳೂ ಈ ದೇವಾಲಯದೊಳಗೆ ಕೆಲವು ಸಣ್ಣ ಗುಡಿಗಳನ್ನು ನಿರ್ಮಿಸಿದ್ದಾರೆ. ದೇವಾಲಯದ ಪಶ್ಚಿಮ ಗೋಪುರ 3ನೆಯ ಕುಲೋತ್ತುಂಗ ಚೋಳನ ಕಾಲಕ್ಕೂ, ಎಂದರೆ 1178ಕ್ಕೂ ಹಿಂದಿನದು. ಸುಂದರವಾದ ಮೂಡಣ ಗೋಪುರಕ್ಕೆ ಸುಂದರಪಾಂಡ್ಯನ್ ಗೋಪುರವೆಂದು ಹೆಸರಿದೆ. 1216ರಲ್ಲಿ ಮಾ¾ವರ್ಮನ್ ಸುಂದರ ಪಾಂಡ್ಯನಿಂದ ಪ್ರಾರಂಭಿಸಲಾದ ಅದರ ನಿರ್ಮಾಣ ಹೊಯ್ಸಳ ವೀರಸೋಮೇಶ್ವರನ ಆಳ್ವಿಕೆಯ ಕಾಲದಲ್ಲಿ ಪೂರ್ಣಗೊಂಡಿತು. ಈ ಗೋಪುರದ ಶಿಲ್ಪಗಳು 13ನೆಯ ಶತಮಾನದ ಚೋಳ-ಪಾಂಡ್ಯರ ಕಾಲದ ಶಿಲ್ಪಕೌಶಲದ ಶ್ರೇಷ್ಠ ಉದಾಹರಣೆಗಳಾಗಿವೆ.	
ದೇವಾಲಯದ ಅಖಿಲಾಂಡ ನಾಯಕಿಯ ಗುಡಿಯನ್ನು ತಂಜವೂರಿನ ಚೋಳರ ಆಳ್ವಿಕೆಯ ಉತ್ತರಾರ್ಧದಲ್ಲೂ ಎರಡನೆಯ ಪ್ರಾಕಾರದಲ್ಲಿರುವ ಉತ್ಸವಮಂಟಪವನ್ನು 17-18ನೆಯ ಶತಮಾನಗಳಲ್ಲೂ ಕಟ್ಟಲಾಯಿತೆಂದೂ ನಾಲ್ಕನೆಯ ಪ್ರಾಕಾರದ ಶಂಕರಾಲವನ್ನು ಪಾಶುಪತ ಶಿವಾಚಾರ್ಯರುಗಳು ಕಟ್ಟಿಸಿದರೆಂದೂ ಅಲ್ಲಿಯ ಶಾಸನಗಳು ತಿಳಿಸುತ್ತವೆ.

	ದೇವಾಲಯದ ಪಕ್ಕಕ್ಕಿರುವ ರಾಜರಾಜೇಶ್ವರ ದೇವಸ್ಥಾನದ 3ನೆಯ ರಾಜರಾಜ ಚೋಳನ ಕಾಲದಲ್ಲಿ ನಿರ್ಮಾಣಗೊಂಡದ್ದು. ದೇವಸ್ಥಾನದ ಪ್ರಾಕಾರದೊಳಗಿರುವ ಪಶುಪತೀಶ್ವರ ಗುಡಿಯನ್ನು ಹೊಯ್ಸಳ ವೀರರಾಮನಾಥನ (1255-95) ಆಳ್ವಿಕೆಯಲ್ಲಿ ನೀಲಕಂಠನಾಯಕನೆಂಬಾತ ನಿರ್ಮಿಸಿದ. ಇಲ್ಲಿ ಮುಖಲಿಂಗ ಪ್ರತಿಷ್ಠಿತವಾಗಿದೆ.

	13ನೆಯ ಶತಮಾನದಿಂದೀಚೆಗೆ ಜಂಬುಕೇಶ್ವರದಲ್ಲಿ ಅನೇಕ ಶೈವಮಠಗಳು ಅಸ್ತಿತ್ವಕ್ಕೆ ಬಂದುವು. 1258-59ರಲ್ಲಿ ಹೊಯ್ಸಳ ವೀರರಾಮನಾಥ ಇಲ್ಲಿ ಶೈವ ಮಠವೊಂದನ್ನು ಸ್ಥಾಪಿಸಿ ಅದಕ್ಕೆ ಭೂಮಿದಾನಗಳನ್ನು ಮಾಡಿದನೆಂದು ಒಂದು ಶಾಸನದಲ್ಲಿ ತಿಳಿಸಲಾಗಿದೆ.

	15-16ನೆಯ ಶತಮಾನದಲ್ಲಿ ಕಾಳಮೇಘಪ್ಪುಲವರ್ ಎಂಬ ಕವಿ ಹಾಡಿದ ತಿರುವಾನೈಕ್ಕಾಉಲಾ ಎಂಬ ಭಕ್ತಿಗೀತೆಯೂ ಕಚ್ಚಿಯಪ್ಪ ಮುನಿವರ್ ರಚಿಸಿದ ತಿರುವಾನೈಕ್ಕಾ ಪುರಾಣಂ ಎಂಬ ಕೃತಿಯೂ ಈ ಶೈವಸ್ಥಲದ ಮಹಾತ್ಮ್ಯವನ್ನು ಒತ್ತಿ ಹೇಳುತ್ತವೆ.
(ಕೆ.ವಿ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ